



ಮಂಗಳೂರು: ವಿದ್ಯುತ್ ಚಾಲಿತ ವಾಹನಗಳು ಆಟೋಮೊಬೈಲ್ ರಂಗದ ಮುಂದಿನ ಭವಿಷ್ಯವಾಗಿದ್ದು ಇಂಧನ ಇಲಾಖೆಯಲ್ಲಿ ಬಳಕೆ ಮಾಡುತ್ತಿರುವ ಸರ್ಕಾರಿ ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಬೇಕು ಎನ್ನುವ ಚಿಂತನೆ ಇದೆ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಹೇಳಿದ್ದಾರೆ.
ಇಂದು ಮಂಗಳೂರಿನ ಪಂಪ್ ವೆಲ್ ಬಳಿ ನೂತನ PIAGGIO ಸಂಸ್ಥೆಯ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಷೋ ರೂಂ ಉದ್ಘಾಟಿಸಿ ಅವರು ಮಾತನಾಡಿದರು.
ಇಂದುದೇಶದಾದ್ಯಂತ ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲಾ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. ಪೆಟ್ರೋಲ್ ಹಾಗೂ ಡೀಸಲ್ ವಾಹನಗಳಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಬೆಲೆಯೂ ಹೆಚ್ಚು ಎನ್ನುವ ಕೂಗುಗಳು ಕೇಳಿ ಬರುತ್ತವೆ. ಹೀಗಿರುವಾಗ ವಿದ್ಯುತ್ ಚಾಲಿತ ವಾಹನಗಳು ಇಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.
ಇಂಧನ ಇಲಾಖೆ ವಹಿಸಿಕೊಂಡ ನಂತರ ವಿದ್ಯುತ್ ಚಾಲಿತ ವಾಹನ ತಯಾರಕ ಕಂಪನಿಗಳ ಸಭೆ ನಡೆಸಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳು ಮುನ್ನಲೆಗೆ ಬರಬೇಕು, ಜನರು ಹೆಚ್ಚು ಆಕರ್ಷಿತರಾಗಬೇಕು ,ಇಂದಿನ ವ್ಯವಸ್ಥೆಯಿಂದ ಸುಧಾರಣೆ ಹೊಂದಬೇಕೆಂದು. ಪೆಟ್ರೋಲ್,ಡೀಸಲ್ ವಾಹನಗಳಿಂದ ವಿದ್ಯುತ್ ಚಾಲಿತ ವಾಹನಗಳ ಕಡೆ ಮುಖ ಮಾಡೋದು ಸುಧಾರಣೆಯ ಒಂದು ಭಾಗ, ಜನರು ಬದಲಾವಣೆ ಕಡೆಗೆ ಹೆಜ್ಜೆಯನ್ನ ಇಡಬೇಕು ಎಂದರು.
ವಿದ್ಯುತ್ ಚಾಲಿತ ವಾಹನಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ೨೦-೪೦% ಸಬ್ಸಿಡಿ ನೀಡಲಾಗುತ್ತಿದೆ. ತ್ರಿಚಕ್ರ ವಾಹನಗಳಿಗೆ ಸುಮಾರು ₹60,೦೦೦ ಸಬ್ಸಿಡಿ ದೊರೆಯುವುದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು. ಇನ್ನು ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿ ಒಂದು ಸಾವಿರ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.
ವಾಹನಗಳ ವಿಚಾರದಲ್ಲಿ ವಿದ್ಯುತ್ ವಾಹನಗಳು ಮುಂದಿನ ಭವಿಷ್ಯ,ಹಾಗಾಗಿ ಆ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ಇಂಧನ ಇಲಾಖೆಯಿಂದಲೇ ಆರಂಭವಾಗಲೆಂದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಳಸುವ ಸರ್ಕಾರಿ ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಬೇಕು ಎನ್ನುವ ಚಿಂತನೆ ಇದೆ ಎಂದು ಅವರು ಹೇಳಿದರು. .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.