logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳದ ಈ ರಾಷ್ಟ್ರೀಯ ಹೆದ್ದಾರಿಯಾಗಿದೆ ಕಳ್ಳರ ಅಡ್ಡಾ,ರಸ್ತೆಗೆ ಹಾಕಿದ್ದ ಕಬ್ಬಿಣದ ಬೋರ್ಡ್, ಕಂಬಗಳನ್ನೇ ಲಪಟಾಯಿಸಿದ ಖತರ್ನಾಕ್ ಕಳ್ಳರು!

ಟ್ರೆಂಡಿಂಗ್
share whatsappshare facebookshare telegram
1 Jul 2026
post image

-ರಾಮ್ ಅಜೆಕಾರು,

ಮಂಗಳೂರು ಹಾಗೂ ಶಿವಮೊಗ್ಗವನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾದ ಎನ್ಎಚ್–169, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ಸಾಗುತ್ತಿದ್ದು, ಕರಾವಳಿ ಮತ್ತು ಮಲೆನಾಡಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆದ್ದಾರಿ ಕಾಮಗಾರಿ ಸುಮಾರು ಶೇ.70ರಷ್ಟು ಪೂರ್ಣಗೊಂಡಿದ್ದು, ಕೆಲವೆಡೆ ಭೂಸ್ವಾಧೀನ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ. ಆದರೂ ಬಹುತೇಕ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗುತ್ತಿವೆ.

ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ರಸ್ತೆ ಸುರಕ್ಷತೆಗೆ ಅಗತ್ಯವಾದ ದಾರಿ ಸೂಚಕ ಫಲಕಗಳು, ವೇಗಮಿತಿ ಫಲಕಗಳು, ರಸ್ತೆ ವಿಭಾಜಕಗಳು ಹಾಗೂ ಬ್ಯಾರಿಕೇಡ್ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸುವ ಕಾರ್ಯ ಆರಂಭಿಸಿತ್ತು. ಈ ಉದ್ದೇಶಕ್ಕಾಗಿ ಸುಮಾರು 50ಕ್ಕೂ ಹೆಚ್ಚು ಕಬ್ಬಿಣದ ಫಲಕಗಳು ಮತ್ತು ಬ್ಯಾರಿಕೇಡ್ಗಳನ್ನು ವಿವಿಧ ಸ್ಥಳಗಳಲ್ಲಿ ಇರಿಸಲಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ಕಳ ಬೈಪಾಸ್ನಿಂದ ಮಾಳ ಗೇಟ್ವರೆಗಿನ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಇರಿಸಲಾಗಿದ್ದ 20ಕ್ಕೂ ಹೆಚ್ಚು ಸೂಚನಾ ಫಲಕಗಳು ನಾಪತ್ತೆಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೆಲವು ಸ್ಥಳಗಳಲ್ಲಿ ಫಲಕಗಳ ಜೊತೆಗೆ ಅವುಗಳನ್ನು ಅಳವಡಿಸಲು ಬಳಸುವ ಕಬ್ಬಿಣದ ಕಂಬಗಳನ್ನೂ ಕಳ್ಳರು ಕತ್ತರಿಸಿ ಕೊಂಡೊಯ್ದಿರುವುದು ಪತ್ತೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕಾಮಗಾರಿ ಇಂಜಿನಿಯರ್ಗಳು, ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಬೇಕಾಗಿದ್ದ ಫಲಕಗಳು ಕಳ್ಳತನವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಚಾಲಕರಿಗೆ ದಿಕ್ಕು, ವೇಗ ಮಿತಿ ಹಾಗೂ ಅಪಾಯದ ಬಗ್ಗೆ ಎಚ್ಚರಿಕೆ ನೀಡುವ ಫಲಕಗಳು ಇಲ್ಲದಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕಳ್ಳರು ಈ ಕಬ್ಬಿಣದ ಫಲಕಗಳು ಹಾಗೂ ಕಂಬಗಳನ್ನು ಗುಜರಿಗೆ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ರಸ್ತೆ ಬದಿಯಲ್ಲಿ ಸಂಗ್ರಹಿಸಿಡಲಾಗಿದ್ದ ಸಾಮಗ್ರಿಗಳ ಮೇಲೆ ರಾತ್ರಿ ವೇಳೆ ನಿಗಾ ಇಲ್ಲದಿರುವುದನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆ.

ಹೆದ್ದಾರಿ ಕಾಮಗಾರಿಯಲ್ಲಿ ಬಳಸುವ ಸೂಚನಾ ಫಲಕಗಳು ಸಾಮಾನ್ಯ ಕಬ್ಬಿಣದಿಂದ ಮಾಡಿರುವುದಲ್ಲ. ದಪ್ಪ ಗುಣಮಟ್ಟದ ಉಕ್ಕು ಹಾಗೂ ಪ್ರತಿಫಲಿಸುವ ವಿಶೇಷ ಹಾಳೆಗಳನ್ನು ಅಳವಡಿಸಿರುವುದರಿಂದ ಅವುಗಳ ಮೌಲ್ಯವೂ ಹೆಚ್ಚಾಗಿದೆ. ಆದರೂ ಗುಜರಿ ಹಣದ ಆಸೆಗೆ ಸಾರ್ವಜನಿಕ ಆಸ್ತಿಯನ್ನೇ ಕಳ್ಳತನ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಘಟನೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಕಳ್ಳತನ ನಡೆದ ಸ್ಥಳಗಳ ಮಾಹಿತಿ ಹಾಗೂ ನಾಪತ್ತೆಯಾಗಿರುವ ಫಲಕಗಳ ಪಟ್ಟಿಯನ್ನು ಸಂಗ್ರಹಿಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗುವ ಸೂಚನಾ ಫಲಕಗಳು ವಾಹನ ಸವಾರರ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂತಹ ಸಾರ್ವಜನಿಕ ಆಸ್ತಿಗಳ ಕಳ್ಳತನದಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುವುದರ ಜೊತೆಗೆ ಸಾರ್ವಜನಿಕರ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಈ ರೀತಿಯ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.