



ಬೆಂಗಳೂರು: ಸುಮಾರು ಒಂದೂವರೆ ಎರಡು ತಿಂಗಳು 100ರಿಂದ 150ರವರೆಗೆ ಇದ್ದ ಕೆ.ಜಿ ಟೊಮೆಟೋ ಬೆಲೆ ಇದೀಗ 20ಕ್ಕೆ ಕುಸಿದಿದೆ.
ಬೆಂಗಳೂರು ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ. ಆಂಧ್ರಪ್ರದೇಶದ ಮಾರುಕಟ್ಟೆಯಿಂದ ಯಥೇಚ್ಛವಾಗಿ ಟೊಮೆಟೋ ಪೂರೈಕೆಯಾಗುತ್ತಿದೆ. ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಆಗಿರುವ ಕೋಲಾರದ ಸಿಎಂಆರ್ ಮಾರುಕಟ್ಟೆಯಲ್ಲಿ 15 ಕೆ.ಜಿ ನಾಟಿ ಟೊಮೆಟೋ ಬಾಕ್ಸ್ 250- 400, ಹೈಬ್ರಿಡ್ ಟೊಮೆಟೋ 250- 450ಕ್ಕೆ ಇಳಿದಿದೆ. ಇದಲ್ಲದೆ, ಸುತ್ತಲಿನ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೋ ಪ್ರಮಾಣವೂ ಹೆಚ್ಚಾಗಿರುವುದರಿಂದ ಬೆಲೆ ಕಡಿಮೆಯಾಗಿದೆ.
ಇದರ ಪರಿಣಾಮ ನಗರದ ಕಲಾಸಿಪಾಳ್ಯ, ಬಿನ್ನಿಮಿಲ್, ಕೆ.ಆರ್.ಮಾರುಕಟ್ಟೆಗಳಿಗೆ ಈ ಹಿಂದೆ ದಿನಕ್ಕೆ ಕೇವಲ 350 ಕ್ವಿಂಟಲ್ ಬರುತ್ತಿದ್ದ ಟೊಮೆಟೋ ಇದೀಗ ಬೇಡಿಕೆಗೆ ಅನುಸಾರವಾಗಿ ಪೂರೈಕೆ ಆಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ 20 ಕೆಜಿ ಬಾಕ್ಸ್‌ಗೆ 600- 700ಕ್ಕೆ ಇಳಿಕೆಯಾಗಿದೆ. ಹೀಗಾಗಿ ಮಲ್ಲೇಶ್ವರ, ಯಶವಂತಪುರ, ಜಯನಗರ ಸೇರಿದಂತೆ ಬಡಾವಣೆಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಯೂ ಕಡಿಮೆಯಾಗಿದೆ. ಕೆಜಿಗೆ 20 ನಿಂದ ಗರಿಷ್ಠ 30 ರವರೆಗೆ ಮಾರಾಟವಾಗುತ್ತಿದೆ.
ಟೊಮೆಟೋ ಬೆಲೆ ನಗರದಲ್ಲಿ ಕೆಜಿಗೆ ಗರಿಷ್ಠ 100- 160 ವರೆಗೆ ತಲುಪಿದ್ದಾಗ ಬಹುತೇಕರು ಖರೀದಿ ಬಿಟ್ಟಿದ್ದರು, ಇಲ್ಲವೇ ಕಡಿಮೆ ಖರೀದಿ ಮಾಡುತ್ತಿದ್ದರು. ಅಡುಗೆಯಲ್ಲಿ ಹುಣಸೆಹಣ್ಣಿನಂತಹ ಪರ್ಯಾಯಕ್ಕೆ ಮೊರೆ ಹೋಗಿದ್ದರು. ಆದರೆ, ಇದೀಗ ಸಹಜ ಬೆಲೆಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಸಂತಸಗೊಂಡಿದ್ದಾರೆ. ಸಹಜವಾಗಿ ಟೊಮೆಟೋ ಖರೀದಿ ಮಾಡುತ್ತಿದ್ದು, ಅಡುಗೆ ಮನೆಯಲ್ಲಿ ಟೊಮೆಟೋ ಕಾಣುತ್ತಿದೆ.
ಸಾಮಾನ್ಯ ಜನ ಮಾತ್ರವಲ್ಲ, ಟೊಮೆಟೋ ದುಬಾರಿಯಾದಾಗ ಹೋಟೆಲ್‌ಗಳು ಕೂಡ ಖಾದ್ಯಗಳಲ್ಲಿ ಟೊಮೆಟೋ ಬಳಕೆಯನ್ನು ಕೈಬಿಟ್ಟಿದ್ದವು. ರಸ್ತೆ ಬದಿಯ ಮಸಾಲಾಪುರಿ ಅಂಗಡಿಗಳಿಂದ ಹಿಡಿದು ಒಂದು ಹಂತದ ಹೋಟೆಲ್‌ಗಳಲ್ಲಿ ಊಟ, ತಿಂಡಿಗಳಲ್ಲಿ ಟೊಮೆಟೋ ಕಾಣುತ್ತಿರಲಿಲ್ಲ. ಸಲಾಡ್‌ನಿಂದ ಟೊಮೆಟೋ ಮಾಯವಾಗಿತ್ತು. ಇದೀಗ ಹೋಟೆಲ್‌ಗಳ ತಿನಿಸುಗಳಲ್ಲಿ ಟೊಮೆಟೋ ಮತ್ತೆ ಹಾಜರಾಗಿದೆ, ಗ್ರಾಹಕರೂ ಖುಷಿಯಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.