



ಉಡುಪಿ: ಗಿಡ ಬೆಳೆದು ಫಲವತ್ತಾಗಬೇಕಾದರೆ, ನೀರು ಮಾತ್ರ ಸಾಕಾಗುವುದಿಲ್ಲ. ಸೂರ್ಯನ ಕಿರಣ ಕೂಡ ಬೇಕಾಗುತ್ತದೆ. ಅದೇ ರೀತಿ ದೇವರು ಎಲ್ಲರಿಗೂ ಒಂದಲ್ಲ ಒಂದು ಪ್ರತಿಭೆಯನ್ನು ನೀಡಿದ್ದಾರೆ. ಅದನ್ನು ಬೆಳೆಸಿ ಬೆಳಗಿಸಬೇಕಾದರೆ ಅದಕ್ಕೆಂದು ಒಂದು ವೇದಿಕೆ ಬೇಕು. ಅಂತಹ ವೇದಿಕೆಯನ್ನು ಪ್ರೈಮ್ ಟಿವಿ ಸಂಸ್ಥೆಯು ಸಪ್ತಸ್ವರ ಕಾರ್ಯಕ್ರಮದ ಮೂಲಕ ನಿರ್ಮಿಸಿದೆ. ಸೋಲು ಗೆಲುವು ಜೀವನದಲ್ಲಿ ಇರುವಂತದ್ದೆ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸಬೇಕು ಎಂದು ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ.ಫಾ. ಜಾರ್ಜ್ ಡಿಸೋಜಾ ಹೇಳಿದ್ದಾರೆ.
ಅವರು ಅ.12ರಂದು ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ರೈಮ್ ಟಿವಿ 8ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸುಸಂದರ್ಭದಲ್ಲಿ ಸಂಸ್ಥೆಯು ಅರ್ಪಿಸಿದ ಸಪ್ತಸ್ವರ ಸೀಸನ್-1 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರೈಮ್ ಟಿವಿ ಸಂಸ್ಥೆಯ ಮುಖ್ಯಸ್ಥರಾದ ರೂಪೇಶ್ ಕಲ್ಮಾಡಿ ಅಧ್ಯಕ್ಷತೆ ವಹಿಸಿದ್ದು, ಭಾಗವಹಿಸಿದ ಪ್ರತಿಭೆಗಳಿಗೆ ಶುಭ ಹಾರೈಸಿದರು.
ಬಳಿಕ ಆರಂಭಗೊಂಡ ಸಪ್ತಸ್ವರ ಸೀಸನ್-1 ಕಾರ್ಯಕ್ರಮದಲ್ಲಿ ಸುಮಾರು 70 ಪ್ರತಿಭೆಗಳು ಭಾಗವಹಿಸಿದ್ದು, 48 ಅಭ್ಯರ್ಥಿಗಳು ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಆಯ್ಕೆಯಾದ ಪ್ರತಿಭೆಗಳಿಗೆ ಪ್ರಥಮ ರೂ.10010, ದ್ವಿತೀಯ ರೂ. 7007, ತೃತೀಯ ರೂ.5005 ಮತ್ತು ಪ್ರಮಾಣ ಪತ್ರ ಹಾಗೂ ಟ್ರೋಫಿ ನೀಡಲಾಗುವುದು ಎಂದು ಸಂಸ್ಥೆಯ ಪಾಲುದಾರ ಅನಿಲ್ ಆಳ್ವ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಡ್ವರ್ಡ್ ಲಾರ್ಸನ್ ಡಿಸೋಜಾ, ಸುಪ್ರೀತಾ ರೂಪೇಶ್ ಕಲ್ಮಾಡಿ, ಮ್ಯಾಕ್ಸಿಮ್ ಮೂಡುಬೆಳ್ಳೆ, ವಿಜೇತಾ, ಮಾಲತಿ, ಹರೀಶ್ ಸಚ್ಚೇರಿಪೇಟೆ, ರಂಜಿತ್, ರಿತೇಶ್ ಮತ್ತಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.