



ಉಡುಪಿ,: : ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿ, ಗಾಯಗೊಳಿಸಿದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2017 ಅಕ್ಟೋಬರ್ 05 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಶಿವಳ್ಳಿ ಗ್ರಾಮದ ಕಲ್ಸಂಕ ಗುಂಡಿಬೈಲು ಬಳಿ ಮರ್ವಿನ್ ವಿಲ್ಫೆçಡ್ ಡಿ ಸೋಜಾ ಎಂಬಾತನು ಬೈಕನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ದೊಡ್ಡಣಗುಡ್ಡೆ ಕಡೆಗೆ ತೆರಳಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದ ಪ್ರಕಾಶ ಶೆಟ್ಟಿಯವರ ಟಿ.ವಿ.ಎಸ್ ಜುಪಿಟರ್ನ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪ್ರಕಾಶ ಶೆಟ್ಟಿ, ಆತನ ಹೆಂಡತಿ ಹಾಗೂ ಮಗನು ರಸ್ತೆಗೆ ಬಿದ್ದು, ಗಾಯಗೊಂಡಿರುವ ಹಿನ್ನೆಲೆ, ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ ಪ್ರಕಾಶ್ ಅವರು ಆರೋಪಿ ಮರ್ವಿನ್ ವಿಲ್ಫೆçಡ್ ಡಿ ಸೋಜಾಗೆ 6 ತಿಂಗಳ ಕಾರಾಗೃಹ ವಾಸ ಶಿಕ್ಷೆ ಹಾಗೂ 1000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿರುತ್ತಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.