



ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ ಸಮುದಾಯ ಆರೋಗ್ಯ ವಿಭಾಗ, ಇವರ ಸಹಯೋಗದೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳು, ವಿಭಾಗದ ಸಿಬ್ಬಂದಿಗಳು, ಉಡುಪಿ ಹಾಗೂ ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮನೆಗಳು ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಡೆಂಗ್ಯೂ ಹಾಗೂ ಮಲೇರಿಯಾ ರೋಗಗಳ ನಿಯಂತ್ರಣಗಳ ಬಗ್ಗೆ ಅರಿವು ಮೂಡಿಸಿದರು.
ಈ ಪ್ರದೇಶಗಳಲ್ಲಿ ಸೊಳ್ಳೆಗಳ ಲಾರ್ವಾ ಸಮೀಕ್ಷೆ ನಡೆಸಿ, ಮನೆಗಳ ಸಮೀಪದಲ್ಲಿ ನಿಂತ ನೀರಿನಲ್ಲಿ ಸೊಳ್ಳೆ ಮರಿಗಳು ಬೆಳೆಯುವುದನ್ನು ತಡೆಯುವ ಹಾಗೂ ರೋಗ ನಿಯಂತ್ರಣ ಕುರಿತು ಅಲ್ಲಿನ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಉಡುಪಿ ನಗರ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಆರೋಗ್ಯ ಕೇಂದ್ರಗಳ ಸಿಬ್ಬಂದಿಯೊಂದಿಗೆ, ಮನೆಗಳ ಹತ್ತಿರ ತ್ಯಾಜಿಸಿದ ಪ್ಲಾಸ್ಟಿಕ್ ಬಾಟಲಿಗಳು, ಕಪ್‌ಗಳು, ಟಯರ್‌ಗಳು ಇತರೆ ಯಾವುದೇ ವಸ್ತುಗಳಲ್ಲಿ ಒಂದು ಅಥವಾ ಎರಡು ಚಮಚಗಳಷ್ಟು ನೀರು ಸಹ 5-6 ದಿನ ನಿಲ್ಲುವಂತಿದ್ದರೆ ಅಲ್ಲಿ ಬೆಳೆಯುತ್ತಿರುವ ಸೊಳ್ಳೆ ಮರಿಗಳನ್ನು (ಲಾರ್ವಾ) ಪ್ರತ್ಯಕ್ಷವಾಗಿ ಮನೆ ಮಂದಿಗೆ ತೋರಿಸಿ, ಸೊಳ್ಳೆಗಳ ನಿಯಂತ್ರಣ ಮಾಡುವ ಬಗ್ಗೆ, ಡೆಂಗ್ಯೂ ಹೆಚ್ಚಿರುವ ಹಾಗೂ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಮಾಹಿತಿ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಡೆಂಗ್ಯೂ ವೈರಸ್ ಹರಡುವ ಈಡಿಸ್ ಸೊಳ್ಳೆಗಳು ಮನೆಯ ಸುತ್ತ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿಯೇ ಹುಟ್ಟಿ ಬೆಳೆದು ರೋಗವನ್ನು ಹರಡುವುದರಿಂದ, ಪ್ರತಿಯೊಬ್ಬರು ಮನೆಯೊಳಗೆ ಹಾಗೂ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡರೆ ರೋಗ ಹರಡುವುದನ್ನು ನಿಯಂತ್ರಿಸಬಹುದೆಂದು ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಮಳೆ ನಿಂತ ಮೇಲೆ ಅಲ್ಲಲ್ಲಿ ನಿಂತಿರುವ ನೀರಿನಲ್ಲಿ ಸೊಳ್ಳೆಗಳು ಕ್ಷಿಪ್ರವಾಗಿ ಬೆಳೆದು ಡೆಂಗ್ಯೂ ರೋಗ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ವೈದ್ಯಕೀಯ ಕಾಲೇಜು ಹಾಗೂ ಇತರ ಸಂಘ- ಸಂಸ್ಥೆಗಳು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ. ಪ್ರಶಾಂತ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.