



ಉಡುಪಿ: ಕೆಲವು ಸಮಯದ ಹಿಂದೆ ಮೂರೂವರೆ ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ತಾಯಿ ಹಾಗೂ ಆಕೆಯ ಪ್ರಿಯಕರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಇಬ್ಬರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಉಡುಪಿ ಜಿಲ್ಲೆ ಅಮಾಸೆಬೈಲು ಠಾಣೆ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಆರೋಪಿ ತಾಯಿ ಪೂರ್ಣಪ್ರಿಯಾ ಮತ್ತು ಆಕೆಯ ಪ್ರಿಯಕರ ಸುಹೇಲ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೆಪ್ಟೆಂಬರ್ 13ರಂದು ತಾಯಿ, ಅನಾರೋಗ್ಯದ ಕಾರಣ ನೀಡಿ ಮಗುವನ್ನು ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಳು. ಗಾಯಗಳ ಬಗ್ಗೆ ತಾಯಿ ಪೂರ್ಣಪ್ರಿಯಾ ಯಾವುದೇ ಮಾಹಿತಿ ನೀಡಿರಲಿಲ್ಲ.
ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು. ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಅಧಿಕಾರಿಗಳು ಮಗುವಿನ ವಿಚಾರಣೆ ನಡೆಸಿದ್ದರು. ಆ ಬಳಿಕ ಅಮಾಸೆಬೈಲು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರಂಭದಲ್ಲಿ ತಾಯಿ, ಮಗು ಜಾರಿ ಬಿದ್ದು ಗಾಯಗೊಂಡಿದೆ ಎಂದು ಹೇಳಿಕೆ ನೀಡಿದ್ದಳು. ಆದರೆ ಮಗು ಮಂಚದಲ್ಲಿ ಮಲಗಬಾರದು ಎಂಬ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು ಎಂಬ ಅಂಶ ಬಯಲಿಗೆ ಬಂದಿದೆ. ಕೆಲ ಸಮಯದ ಹಿಂದೆ ಮಗುವಿನ ತಂದೆ ನಿಧನರಾಗಿದ್ದರು. ಆ ಬಳಿಕ ಗೆಳೆಯ ಸುಹೇಲ್ ನೊಂದಿಗೆ ಮಗುವಿನ ತಾಯಿ ಪೂರ್ಣಪ್ರಿಯಾ ಸಂಪರ್ಕದಲ್ಲಿದ್ದಳು. ತಾಯಿ ಹಾಗೂ ಆಕೆಯ ಪ್ರಿಯಕರ ಸುಹೇಲ್ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಶರಣಾಗಿದ್ದರು. ನ್ಯಾಯಾಲಯ ಮಧ್ಯಾಂತರ ಜಾಮೀನು ಮಂಜೂರು ಮಾಡಿತ್ತಾದರೂ ಪ್ರಕರಣದ ಗಂಭೀರತೆ ಮನಗಂಡು ಇದೀಗ ಜಾಮೀನು ರದ್ದು ಮಾಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.