



ಉಡುಪಿ: ಉಡುಪಿ ಜಿಲ್ಲೆಯ ಜನರು ಶಾಂತಿ ಪ್ರಿಯರು, ಶಿಸ್ತಿನ ಸಿಪಾಯಿಗಳು. ಇಂತಹ ಜಿಲ್ಲೆಯಲ್ಲಿ ನಾಲ್ಕು ಜನರ ಕ್ರೂರ ಹತ್ಯೆ ನಡೆಸಿದ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು. ಅವರು ಇಂದು ಉಡುಪಿಯ ನೇಜಾರುವಿನ ನೂರ್ ಮೊಹಮ್ಮದ್ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಉಡುಪಿ ನಗರದಲ್ಲಿ ಸುಮಾರು ಹದಿನೈದು ದಿನಗಳ ಹಿಂದೆ ನಡೆದ ಒಂದೇ ಕುಟುಂಬದ ನಾಲ್ಕು ಜನ ಸದಸ್ಯರನ್ನು ಒಬ್ಬ ದುಷ್ಕರ್ಮಿ ಕ್ರೂರವಾಗಿ ಕೊಂದಿರುವ ದುರ್ಘಟನೆ ಇಡೀ ಜಿಲ್ಲೆಗೆ ಹಾಗೂ ಜಿಲ್ಲೆಯ ಜನತೆಗೆ ಆಘಾತ ತಂದಿರುವ ವಿಷಯ. ಕುಟುಂಬದಲ್ಲಿ ಉಳಿದಿರುವ ನೂರ್ ಮೊಹಮ್ಮದ್ ಹಾಗೂ ಸಹೋದರ ರೊಂದಿಗೆ ಸಮಾಲೋಚನೆ ನಡೆಸಿದ್ದು, ಘಟನೆ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದರು. ಘಟನೆ ನಡೆದ ದಿನದಿಂದಲೂ ಸತತವಾಗಿ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆಯಲಾಗಿದೆ. 4 ಜನರ ಕೊಲೆ ನಡೆದ ಸ್ಥಳಗಳನ್ನು ಪರಿಶೀಲನೆ ನಡೆಸಲಾಗಿದೆ. ಆರೋಪಿ ಎಲ್ಲಾ ರೀತಿಯಲ್ಲಿ ಪೂರ್ವ ತಯಾರಿ ಮಾಡಿಕೊಂಡು ಬಂದು ಹತ್ಯೆಗೈದಿರುತ್ತಾನೆ. ಐನಾಝ್ ದೇಹದ ಮೇಲೆ 10-15 ಬಾರಿ ಚೂರಿಯಿಂದ ಇರಿದಿದ್ದನ್ನು ಗಮನಿಸಿದಾಗ ಆರೋಪಿಯ ಸಿಟ್ಟು, ದ್ವೇಷಗಳನ್ನು ಗಾಯಗಳಿಂದ ಲೆಕ್ಕಹಾಕಬಹುದು. ಸಾಮಾನ್ಯವಾಗಿ ಕೊಲೆ ನಡೆದಾಗ ಐಪಿಸಿ ಸೆಕ್ಷನ್ 302 ರಡಿ ಪ್ರಕರಣ ದಾಖಲಿಸಿ, ಪ್ರಕರಣ ಸಾಬೀತಾದಲ್ಲಿ ಕಲಂ 302 ಪ್ರಕಾರ 14 ವರ್ಷ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ಪೊಲೀಸರ ತನಿಖೆಯ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗುವುದು ಎಂದರು.
ಈ ಹತ್ಯೆಗಳು ಸಂಭವಿಸಿರುವುದು ಅವರಿಗೆ ಹಾಗೂ ಸಸಂಬ೦ಧಿಕರಿಗೆ ಜೀವನ ಪರ್ಯಂತ ಇರುವ ನೋವು. ಆಯೋಗದ ವತಿಯಿಂದ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳಿಗೆ ಶಿಫಾರಸ್ಸು ಮಾಡಲಾಗುವುದು. ಕೇಸಿನ ಮೇಲ್ವಿಚಾರಣೆಯನ್ನು ಈ ಭಾಗದ ಪಶ್ಚಿಮ ವಲಯದ ಐ.ಜಿ.ಪಿ ಅವರುಮೇಲ್ವಿಚಾರಣೆ ವಹಿಸಬೇಕು. ಒಂದು ವರ್ಷದೊಳಗೆ ತನಿಖೆ ಮಿಗಿಸಿ, ವಿಶೇಷ ನ್ಯಾಯಾಲಯದ ಮುಂದೆ ದೋಷಾರೋಪಣೆ ಪತ್ರ ಸಲ್ಲಿಸಬೇಕು ಎಂದರು.
ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಹತ್ಯೆ ನಡೆದ ದಿನದಂದು ಹಿಂದೂಗಳು ದೀಪಾವಳಿ ಹಬ್ಬವನ್ನೂ ಆಚರಿಸಲಿಲ್ಲ. ನಾವೆಲ್ಲರೂ ಒಂದೇ ಜಾತಿಗೆ ಸೇರಿದವರು ಅದು ಮಾನವ ಜಾತಿ. ಜಿಲ್ಲೆಯ ಜನತೆ ಒಗ್ಗಟ್ಟಾಗಿ, ಈ ಕುಟುಂಬದ ಜೊತೆ ನಿಂತಿರುವುದು ಸಂತಸ ತಂದಿದೆ ಎಂದರು. ಶಾಂತಿಯುತ ಸಮಾಜವನ್ನು ನಾವು ಬಯಸುತ್ತಿದ್ದು, ಸೌಹಾರ್ದಯುತವಾಗಿ ಜೀವನ ನಡೆಸಬೇಕು. ಉಡುಪಿಯು ಶಾಂತಿಯುತ ಜಿಲ್ಲೆ. ಇಂತಹ ಘಟನೆಗಳು ಪುನರಾರ್ವನೆಯಾಗದಂತೆ ಕ್ರಮವಹಿಸಬೇಕು ಎಂದರು.
ನ್ಯಾಯ ಸಿಗಬೇಕು. ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಜನರು ಪೊಲೀಸರ ಬಳಿ ಕೇಳಿಕೊಳ್ಳುತ್ತಿದ್ದಾರೆ. ಘಟನೆಯ ಬಗ್ಗೆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರಿಗೆ ನೀಡಲಿ ಎಂದ ಅವರು, ಕಳೆದು ಹೋಗಿರುವ ಜೀವಗಳು ಸರಕಾರದ ಆಸ್ತಿ. ಕೇಸ್ ನಡೆಸುವುದರ ಜೊತೆಗೆ ಇಂಡಿಗೋದಲ್ಲಿ ಕೆಲಸ ಮಾಡುತ್ತಿರುವ ಅವರ ಮಗ ಅಸದ್ ಮೊಹಮ್ಮದ್ ಅವರು ಬಿ.ಬಿ.ಎಮ್ ಪೂರೈಸಿದ್ದು, ಅವರಿಗೆ ಕಂಪ್ಯಾಸಿನೇಟ್ ಗ್ರೌಂಡ್ ಆಧಾರದ ಮೇಲೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಲು ಮುಖ್ಯಮಂತ್ರಿಗಳಿಗೆ ಹಾಗೂ ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.