



ಕುಂದಾಪುರ: ಶಾಂತವಾಗಿದ್ದ ಉಡುಪಿ ಜಿಲ್ಲೆ ಇದೀಗ ಹಿಜಾಬ್ ವಿಚಾರಕ್ಕೆ ಸಂಭಂದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಉಡುಪಿ ಬಾಲಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿಗೆ ಹಿಜಾಬ್ ವಿವಾದ ಪ್ರವೇಶಿಸಿದೆ.
ಬುಧವಾರ ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಭುಗಿಲೆದ್ದಿದ್ದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಪೋಷಕರ ಸಭೆ ವಿಫಲವಾಗಿದೆ.
ಕುಂದಾಪುರದ ಜ್ಯೂನಿಯರ್ ಕಾಲೇಜು (ಸರಕಾರಿ ಪದವಿ ಪೂರ್ವ ಕಾಲೇಜು) ಈ ಭಾಗದಲ್ಲಿ ಹಲವು ವರ್ಷಗಳಿಂದ ಉತ್ತಮ ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. ಕಾಲೇಜಿಗೆ ಒಂದಷ್ಟು ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಬರುತ್ತಿರುವುದನ್ನು ವಿರೋಧಿಸಿ ಮತ್ತೊಂದಷ್ಟು ವಿದ್ಯಾರ್ಥಿಗಳು ಬುಧವಾರ ಕೇಸರಿ ಶಾಲು ಧರಿಸಿ ಆಗಮಿಸಿದ್ದರು. ಸುಮಾರು 28 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸುತ್ತಿದ್ದು ಇಂದು 100ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಬರುವ ಲಕ್ಷಣಗಳು ಕಾಣುತ್ತಲೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಖುದ್ದು ಕಾಲೇಜಿಗೆ ಭೇಟಿ ನೀಡಿದ್ದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಿಜಾಬ್ ಕುರಿತಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರ ಜತೆ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದು, ಸಂಧಾನ ವಿಫಲವಾಗಿದೆ. ಹಿಜಾಬ್ ಧರಿಸುವುದು ನಮ್ಮ ಪದ್ಧತಿ ಎಂದು ಪೋಷಕರು ಪಟ್ಟು ಹಿಡಿದರು.
ವಸ್ತ್ರಸಂಹಿತೆ ಹೊರತಾಗಿ ಬೇರೆ ಬಟ್ಟೆಗಳಿಗೆ ಅವಕಾಶ ಇಲ್ಲ ಎಂದು ಸಚಿವರು ಸೂಚನೆ ನೀಡಿದ್ದು, ಸಮವಸ್ತ್ರದ ಹೊರತಾಗಿ ಇತರ ವಸ್ತ್ರ ಧರಿಸಿದರೆ ಕಾಲೇಜು ಆವರಣದೊಳಗೆ ಪ್ರವೇಶ ಇಲ್ಲ. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಾಳೆಯಿಂದ ಎರಡೂ ಸಮುದಾಯದ ವಿದ್ಯಾರ್ಥಿಗಳು ವಸ್ತ್ರ ಸಂಹಿತೆ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಕಾಲೇಜಿಗೆ ಪ್ರವೇಶವಿಲ್ಲ ಎಂದು ಕಾಲೇಜು ಮೂಲಗಳು ತಿಳಿಸಿದೆ.
ಕಾಲೇಜಿಗೆ ಪ್ರವೇಶಾತಿ ನೀಡುವಾಗ ಕಾಲೇಜಿನ ನಿಯಮಗಳಿಗೆ ನಾವು ಬದ್ದರು ಎಂದು ಪೋಷಕರು ಸಹಿ ಹಾಕಿ ನೀಡಿದ ಅರ್ಜಿ ನಮೂನೆ ನಮ್ಮ ಬಳಿ ಇದೆ. ಹಿಜಾಬ್ ವಿಚಾರಕ್ಕೆ ಸಂಭಂದಿಸಿ ಸಚಿವರೊಂದಿಗೆ ಚರ್ಚಿಸಿದಾಗ ಕಾಲೇಜಿನ ಆವದೊಳಗೆ ವಸ್ತ್ರ ಸಂಹಿತೆ ಪಾಲನೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕುಂದಾಪುರ ಶಾಸಕ
ಪ್ರತಿ ದಿನ ಜಿಲ್ಲೆಯ ಒಂದೊಂದು ಕಾಲೇಜಿನಲ್ಲಿ ಹಿಜಾಬ್ ವಿವಾದವನ್ನು ಮಾಡಲಾಗುತ್ತಿದ್ದು, ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಇದು ಕೊನೆ ಗೊಳ್ಳದೇ ಇದ್ದರೇ ಜಿಲ್ಲಾದ್ಯಂತ ಹಿಂ.ಜಾ.ವೇ ಯ ಹಿಂದು ಯುವ ವಾಹಿನಿ ತಕ್ಕ ಉತ್ತರ ನೀಡಲಿದೆ.
ರಿಕೇಶ್ ಪಾಲನ್ ಕಡೆಕಾರ್ ಜಿಲ್ಲಾ ಸಂಚಾಲಕ ಹಿಂದೂ ಯುವ ವಾಹಿನಿ( ಹಿಂ.ಜಾ.ವೇ)
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.