



ಉಡುಪಿ:
ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ಮನೆಯಲ್ಲಿ ಇರಲು ವ್ಯವಸ್ಥೆ ಮಾಡಿದ ಮನೆ ಮಾಲೀಕನ ಬ್ಯಾಂಕ್ ಹಣ ಲಪಟಾಯಿಸಿ, ಮಾಲಿಕನ ಮನೆಯಲ್ಲೂ ಕಳ್ಳತನ ನಡೆಸಿದ ಘಟನೆ ಉಡುಪಿ ನಗರದ ಬನ್ನಂಜೆಯಲ್ಲಿ ನಡೆದಿದೆ. ಇಲ್ಲಿನ ಮೂಡನಿಡಂಬೂರು ಗ್ರಾಮದ 79ವರ್ಷದ ಎಂ .ಬಾಲಕೃಷ್ಣ ನಾಯಕ್ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಸದ್ಯ ನಿವೃತ್ತ ಜೀವನ ನಡೆಸುತ್ತಿದ್ದರು. ಏಕಾಂಗಿಯಾಗಿ ವಾಸವಿದ್ದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿಕೊಂಡಿರುವ ಹಾವೇರಿಯ ರಮೇಶ್ ಮತ್ತು ಆತನ ಪತ್ನಿಗೆ ಮನೆಯಲ್ಲಿ ಉಚಿತ ರೂಮ್ ನೀಡಿ ವಾಸಕ್ಕೆ ವ್ಯವಸ್ಥೆ ಮಾಡಿದ್ದರು. ಮನೆ ಮಾಲೀಕ ಬಾಲಕೃಷ್ಣ ನಾಯಕ್ ಅವರ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಒಟಿಪಿ ಬಳಸಿಕೊಂಡು ಬೇರೆ ಬೇರೆ ದಿನಗಳಲ್ಲಿ ರಮೇಶ್ ವಿವಿಧ ಎಟಿಎಂಗಳಿಂದ ಒಟ್ಟು ರೂಪಾಯಿ 9,75,500/- ನ್ನು ಡ್ರಾ ಮಾಡಿ ವಂಚನೆ ಮಾಡಿದ್ದಾನೆ ಅಂತ ಬಾಲಕೃಷ್ಣ ನಾಯಕ್ ಅವರು ಆರೋಪಿಸಿದ್ದಾರೆ. ಅಲ್ಲದೇ ಮನೆಯಲ್ಲಿದ್ದ 2 ಚಿನ್ನದ ಉಂಗುರಗಳು ಕಾಣೆಯಾಗಿದ್ದು, ಇವುಗಳನ್ನೂ ಸಹ ಆರೋಪಿತನು ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯ ಇರುವುದಾಗಿ ಮನೆ ಮಾಲಿಕ ಬಾಲಕೃಷ್ಣ ಅವರು ದೂರು ನೀಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.