



ಉಡುಪಿ: ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ಸುಗುಣೇಂದ್ರತೀರ್ಥ ಶ್ರೀಪಾದರ ಹಾಗೂ ಸುಶ್ರೀಂದ್ರತೀರ್ಥ ಶ್ರೀಪಾದರ ಪುರಪ್ರವೇಶ ಮತ್ತು ಪೌರಸನ್ಮಾನ ಕಾರ್ಯಕ್ರಮ ಜನವರಿ 8ರ ಸೋಮವಾರ ಸಂಜೆ 7 ಗಂಟೆಗೆ ಉಡುಪಿ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ನಡೆಯಲಿದೆ ಎಂದು ಪರ್ಯಾಯ ಸಮಿತಿಯ ಅಧ್ಯಕ್ಷ ಡಾ. ಎಚ್ ಎಸ್ ಬಲ್ಲಾಳ್ ಹೇಳಿದರು.
ಉಡುಪಿಯ ಪುತ್ತಿಗೆ ಮಠದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳು ಜನವರಿ 18ರಂದು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಜೊತೆಯಲ್ಲಿ ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ಪರ್ಯಾಯ ಪೂರ್ವಭಾವಿಯಾಗಿ ದೇಶ-ವಿದೇಶಗಳಲ್ಲಿ ಸಂಚರಿಸಿ ಜನವರಿ 8 ರಂದು ಉಡುಪಿಗೆ ಪುರಪ್ರವೇಶ ಮಾಡಲಿದ್ದಾರೆ ಎಂದರು.
ಅಂದು ಮಧ್ಯಾಹ್ನ 3.30ಕ್ಕೆ ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀ ಮಠದ ಸಕಲ ಗೌರವಗಳೊಂದಿಗೆ ಶ್ರೀಪಾದರನ್ನು ಬರಮಾಡಿಕೊಳ್ಳಲಾಗುವುದು. ಸಂಜೆ 6-45ಕ್ಕೆ ಶ್ರೀ ಮಠ ಪ್ರವೇಶ ಮಾಡಲಿರುವ ಶ್ರೀಗಳನ್ನು ಊರಿನ ಗಣ್ಯರು, ಸ್ವಾಗತ ಸಮಿತಿಯ ಪದಾಧಿಕಾರಿಗಳು ಹಾಗೂ ಹಿರಿಯರ ಸಮ್ಮುಖದಲ್ಲಿ ಪೌರಸಮ್ಮಾನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಪರ್ಯಾಯ ಸಮಿತಿಯ ಕಾರ್ಯಾಧ್ಯಕ್ಷ ರಘುಪತಿ ಭಟ್ ಮಾತನಾಡಿ, ಪೌರಸಮ್ಮಾನ ಕಾರ್ಯಕ್ರಮದಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.