



ಉಡುಪಿ:
ಐದು ವರ್ಷಗಳ ಹಿಂದೆ ಗುಜರಿ ಹೆಕ್ಕಿಕೊಂಡು ಬದುಕು ಸಾಗಿಸುತ್ತಿದ್ದ 78 ವರ್ಷ ಪ್ರಾಯದ ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಆದೇಶ ನೀಡಿದೆ. ಶಿವಮೊಗ್ಗ ಮೂಲದ ಇರ್ಫಾನ್ ಶಿಕ್ಷೆಗೆ ಗುರಿಯಾದ ಆರೋಪಿ. ಈತ ಉಡುಪಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. 2017ರ ಜೂನ್ 5ರಂದು ಉಡುಪಿ ಪರಿಸರದಲ್ಲಿ ಗುಜರಿ ಮಾರಾಟ ಮಾಡಿಕೊಂಡು ಬದುಕುತ್ತಿದ್ದ ವೃದ್ಧೆಯನ್ನು ತೆಂಕಪೇಟೆ ಪರಿಸರದ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿ ಆಕೆಯ ಬಳಿಯಿದ್ದ 30 ಸಾವಿರ ರೂ. ನಗದು ಹಾಗೂ ಆಭರಣ ದೋಚಿಕೊಂಡು ಹೋಗಿದ್ದನು ಎನ್ನಲಾಗಿದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2022ರ ಎ.7ರಂದು ನ್ಯಾಯಾಲಯ ಈ ಪ್ರಕರಣ ವಿಚಾರಣೆ ಆರಂಭಿಸಿದ್ದು, 18 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ಹೇಳಿಕೆ ಪಡೆದು ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ದಿನೇಶ್ ಹೆಗ್ಡೆ ಅಭಿಪ್ರಾಯಪಟ್ಟರು. ಅದರಂತೆ ಆರೋಪಿಗೆ ಅತ್ಯಾಚಾರ ಪ್ರಕರಣದಡಿ 10ವರ್ಷ ಕಠಿಣ ಜೈಲುಶಿಕ್ಷೆ ಮತ್ತು 50ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಷನ್ ಜಯರಾಮ ಶೆಟ್ಟಿ ವಾದಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.