logo
SHARADA TECHERS.jpeg
hindalco everlast.jpeg
jyotisyalaya.jpeg

ಉಡುಪಿ: ಮಳೆಗಾಲದಲ್ಲಿ ಜೀವ ಹಾನಿ ಹಾಗೂ ಆಸ್ತಿ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ಟ್ರೆಂಡಿಂಗ್
share whatsappshare facebookshare telegram
25 Jul 2024
post image

ಉಡುಪಿ: ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿಯೂ ಸಹ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಹೆಚ್ಚಿನ ಮಾನವ ಜೀವ ಹಾನಿ ಹಾಗೂ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನ್ಸೂನ್ ಮುಂಗಾರು ಮಳೆಯು ಆಗಸ್ಟ್ ಕೊನೆಯವರೆಗೂ ಬರಲಿದೆ, ನೆರೆ-ಪ್ರವಾಹವು ಯಾವಾಗ ಬೇಕಾದರೂ ಉಂಟಾಗುವ ಸಾಧ್ಯತೆಗಳಿರುತ್ತವೆ. ಇವುಗಳ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು. ನಗರ ಹಾಗೂ ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ನುಗ್ಗಿ ನೆರೆ ಉಂಟಾಗುವ ಸಾಧ್ಯತೆಗಳಿರುವ ವ್ಯಾಪ್ತಿಯಲ್ಲಿ ಜನಸಂಖ್ಯೆ, ಕುಟುಂಬಗಳನ್ನು ತಕ್ಷಣದಲ್ಲಿಯೇ ಬೇರೆಡೆಗೆ ವರ್ಗಾಯಿಸುವುದು ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಿಕೊಂಡು, ಸಮಸ್ಯೆಯಾದಲ್ಲಿ ಕೂಡಲೇ ನೆರವಿಗೆ ಧಾವಿಸಬೇಕು ಎಂದರು.

ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 50ರಷ್ಟು ಹೆಚ್ಚಾದರೆ, ಪ್ರಸ್ತುತ ಈವರೆಗೆ ಒಟ್ಟಾರೆ ಶೇ. 17 ರಷ್ಟು ಹೆಚ್ಚು ಮಳೆಯಾಗಿದೆ. ಕೆಲವು ನದಿಗಳು ಅಪಾಯದ ಮಟ್ಟ ಮೀರಿ ಹರಿದಿವೆ. ಎನ್.ಡಿ.ಆರ್.ಎಫ್ ನಿಯಮಾವಳಿ ಅನ್ವಯ ನಷ್ಟ ಪರಿಹಾರ ನೀಡಲು

ಮಾಹಿತಿಗಳನ್ನು ಕ್ರೋಢೀಕರಿಸಿ ನೀಡಬೇಕು. ಈವರೆಗೆ 645 ಮನೆಗಳು ಭಾಗಶಃ , 21 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗಳಾಗಿವೆ. 90,882 ಹೆ. ರಷ್ಟು ತೋಟಗಾರಿಕಾ ಹಾನಿ, 59.95 ರಷ್ಟು ಕೃಷಿ ಹಾನಿ ಸೇರಿದಂತೆ ಮೂಲಸೌಕರ್ಯಗಳ ಅಂದಾಜು ನಷ್ಟ 100.37 ಲಕ್ಷ ರೂ. ಗಳಷ್ಟು ಹಾನಿ ಉಂಟಾಗಿವೆ ಎಂದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿ.ಡಿ.ಓಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಆಗಿಂದಾಗ್ಗೆ ಸಭೆ ನಡೆಸಬೇಕು ಎಂದ ಅವರು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿಯೂ ಸಹ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಇ.ಓ ಗಳೊಂದಿಗೆ ಸಮನ್ವಯತೆ ಹೊಂದಿ ತುರ್ತು ಸಂದರ್ಭದಲ್ಲಿ ಸ್ಪಂದಿಸಬೇಕು ಎಂದರು.

ಕಾಲು ಸಂಕ, ಸಣ್ಣ-ಪುಟ್ಟ ಕಟ್ಟಡಗಳ ದುರಸ್ಥಿ ಕಾರ್ಯ, ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಮತ್ತಿತರ ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಳ್ಳಲು ಎನ್.ಡಿ.ಆರ್.ಎಫ್‍ನ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು. ಹಾನಿ ವರದಿ ನೀಡುವ ಮುನ್ನ ಅಭಿಯಂತರರುಗಳು ಸ್ಥಳ ಪರಿಶೀಲನೆ ಮಾಡಿ ನಿಖರ ನಷ್ಟದ ವರದಿ ನೀಡಬೇಕು ಎಂದರು. ಕೆಲವು ಮೀನುಗಾರಿಕೆ ಚಟುವಟಿಕೆಗೆ ಇರುವ ರಸ್ತೆಗಳು ಹಾನಿಗಳಾಗಿವೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಅವುಗಳ ನಿರ್ವಹಣೆಗೆ ಅಗತ್ಯವಿರುವ ಪ್ರಸ್ತಾವನೆಯನ್ನು ಕೂಡಲೇ ನೀಡಬೇಕೆಂದು ಸೂಚನೆ ನೀಡಿದರು.

ಡೆಂಗ್ಯೂ ಪ್ರಕರಣಗಳು ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಎಚ್ಚರದಿಂದ ಇದ್ದು, ಮಳೆಯ ನೀರು ಎಲ್ಲೆಂದರಲ್ಲಿ ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಕಲ್ಲುಕೋರೆಗಳಲ್ಲಿ ಸಹ ನೀರು ನಿಲ್ಲದಂತೆ ಎಚ್ಚರ ವಹಿಸಲು ಮಾಲೀಕರಿಗೆ ಸೂಚನೆ ನೀಡಬೇಕು. ಫಾಗಿಂಗ್ ಹಾಗೂ ಕೆಮಿಕಲ್ ಸ್ಪ್ರೇ ಮಾಡುವಂತೆ ತಿಳಿಸಬೇಕು ಎಂದ ಅವರು, ಈವರೆಗೆ 05 ಮಲೇರಿಯಾ ಪ್ರಕರಣಗಳು ಕಂಡುಬಂದಿವೆ. ಇವುಗಳೂ ಸಹ ಹೆಚ್ಚಾಗದಂತೆ ಜಾಗೃತಿ ವಹಿಸಬೇಕು ಎಂದು ಸೂಚನೆ ನೀಡಿದರು. ಮುಂದಿನ ಎರಡು-ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳು ಕಡಲಕೊರೆತ ಸೇರಿದಂತೆ ಮತ್ತಿತರ ಮಳೆ ಹಾನಿಯ ಕುರಿತು ಪ್ರತ್ಯೇಕ ಸಭೆಯನ್ನು ನಡೆಸಲಿದ್ದಾರೆ. ಸಭೆಗೆ ಮಾಹಿತಿ ನೀಡಲು ಹಾಗೂ ಅನುದಾನ ಪಡೆಯಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ನಷ್ಟಗಳ ವಿವರವನ್ನು ಛಾಯಾಚಿತ್ರದೊಂದಿಗೆ ಇಲಾಖಾವಾರು ಅತೀ ಶೀಘ್ರದಲ್ಲಿ ನೀಡಬೇಕೆಂದು ಸೂಚನೆ ನೀಡಿದರು.

ಮಳೆಯಿಂದಾಗಿ ಹಳೆಯ ವಿದ್ಯುತ್‍ಚ್ಛಕ್ತಿ ತಂತಿಗಳು ಬಿದ್ದು, ಜೀವ ಹಾನಿ ಉಂಟಾಗುವ ಸಂಭವವಿರುವುದರಿಂದ ಹಳೆಯ ತಂತಿಗಳನ್ನು ಬದಲಾಯಿಸಲು ಮೆಸ್ಕಾಂ ಇಲಾಖೆಯವರು ಕ್ರಮ ಕೈಗೊಳ್ಳಬೇಕು, ಈಗಾಗಲೇ ಅಪಾಯಕಾರಿ ರಸ್ತೆ ಬದಿಗಳ ಅನೇಕ ಮರಗಳನ್ನು ತೆರವುಗೊಳಿಸಲಾಗಿದೆ. ಕೆಲವು ಖಾಸಗಿಯವರ ಜಾಗದಲ್ಲಿಯೂ ಸಹ ಅಪಾಯಕಾರಿಯಾದ ಮರಗಳು ಇವೆ ಎಂದು ದೂರುಗಳು ಕಂಟ್ರೋಲ್ ರೂಂ ಗಳಿಗೆ ಬರುತ್ತಿವೆ. ಇವುಗಳ ತೆರವಿಗೆ ಅಗತ್ಯ ಕ್ರಮ ವಹಿಸಬೇಕು. ಅದರ ಖರ್ಚನ್ನು ಖಾಸಗಿ ಮಾಲೀಕರಿಂದ ತೆರಿಗೆ ರೀತಿಯಲ್ಲಿ ವಸೂಲಿ ಮಾಡಬೇಕೆಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಎನ್, ಡಿಎಫ್‍ಓ ಗಣಪತಿ, ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರ್‍ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

WhatsApp Image 2024-08-15 at 9.09.03 AM.jpeg
WhatsApp Image 2024-08-15 at 9.03.12 AM.jpeg
WhatsApp Image 2024-08-15 at 8.30.19 AM.jpeg
33e25510-25e3-404f-a6e8-be120fdee729.jpg
WhatsApp Image 2024-08-15 at 7.59.13 AM.jpeg
WhatsApp Image 2024-08-15 at 8.02.53 AM.jpeg
WhatsApp Image 2024-08-15 at 9.13.39 AM.jpeg
WhatsApp Image 2024-04-29 at 2.40.38 PM.jpeg
sharada.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.