



ಉಡುಪಿ: ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದ ಟೆಂಪೋ ರಿಕ್ಷಾದಲ್ಲಿ ಬಂದು ಕಸದ ಕೊಂಪೆಗೆ ಕೂಲಿಕಾರ್ಮಿಕನ ಮೃತದೇಹ ಎಸೆದು ಹೋದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೃತ ಕೂಲಿ ಕಾರ್ಮಿಕನ ಪತ್ನಿ ತನ್ನ ಗಂಡನ ಸಾವಿನಲ್ಲಿ ಸಂಶಯವಿದೆ ಎಂದು ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಏನಿದು ಪ್ರಕರಣ.? ಫೆ.16ರಂದು ಮಧ್ಯಾಹ್ನ ಟೆಂಪೋ ರಕ್ಷಾದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕೆಮ್ಮಣ್ಣುವಿನ ಸಂತೆ ಮಾರ್ಕೆಟ್ ಬಳಿ ಕಸದ ಕೊಂಪೆಗೆ ವ್ಯಕ್ತಿಯೊಬ್ಬರನ್ನು ಎಸೆದು ಹೋಗಿದ್ದರು. ಆದರೆ ಆ ವ್ಯಕ್ತಿ ಬಳಿಕ ಮೃತಪಟ್ಟಿದ್ದನು. ವ್ಯಕ್ತಿಯನ್ನು ಎಸೆದು ಹೋಗುವ ದೃಶ್ಯ ಅಲ್ಲೆ ಎದುರಿನ ಆಭರಣ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿಯ ದೃಶ್ಯ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ವ್ಯಕ್ತಿಯನ್ನು ಎಸೆದುಹೋದ ಬಸವರಾಜ್ ನಾಗಪ್ಪ ಹಳೆಮನೆ ಹಾಗೂ ಇನ್ನೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಮೃತ ವ್ಯಕ್ತಿ ಶಿವಮೊಗ್ಗ ಜಿಲ್ಲೆಯ ಸೊರಬ ನಿವಾಸಿ ಹನುಮಂತಪ್ಪ (39) ಎಂದು ಗೊತ್ತಾಗಿದೆ. ಈತ ಸಂತೆ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ಕೆಮ್ಮಣ್ಣು ಸಂತೆಗೆ ಪರಿಚಯದ ಬಸವರಾಜ್ ನಾಗಪ್ಪ ಹಳೆಮನೆ ಎಂಬಾತನೊಂದಿಗೆ ಬಂದಿದ್ದನು. ಆದರೆ, ಹನುಮಂತಪ್ಪನು ಎದೆನೋವು ಜ್ವರ ತಲೆನೋವು ಎಂದು ಹೇಳಿದ್ದು, ಆಗ ಬಸವರಾಜ್ ಜ್ವರದ ಮಾತ್ರೆ ಹಾಗೂ ಜಂಡು ಬಾಂಬ್ ತಂದು ಕೊಟ್ಟಿದ್ದನು. ನಂತರ ಮಧ್ಯಾಹ್ನ ಸುಮಾರು 1.30 ಕ್ಕೆ ಬಸವರಾಜ್ ರಿಕ್ಷಾದ ಬಳಿ ಬಂದಾಗ ನೋಡಿದಾಗ ಹನುಮಂತಪ್ಪ ಮಲಗಿದ್ದು, ಎಷ್ಟೇ ಕರೆದು ಎಬ್ಬಿಸಿದರೂ ಏಳದೆ ಇದ್ದಾಗ ಮದ್ಯಪಾನ ಮಾಡಿ ಮಲಗಿರಬಹುದು ಎಂದು ಊಹಿಸಿ ಆತನನ್ನು ರಿಕ್ಷಾದಿಂದ ಕೆಳಗೆ ಇಳಿಸಿ ರಸ್ತೆಯ ಬದಿ ಮರದ ನೆರಳಿನಲ್ಲಿ ಮಲಗಿಸಿ ಹೋಗಿರುವುದಾಗಿ ವಿಚಾರಣೆ ವೇಳೆ ಬಸವರಾಜ್ ಬಾಯಿಟ್ಟಿದ್ದಾನೆ. ಮೇಲ್ನೋಟಕ್ಕೆ ಇದು ಕೊಲೆಯಲ್ಲ: ಎಸ್ಪಿ ಮೇಲ್ನೋಟಕ್ಕೆ ಪರಿಶೀಲನೆ ನಡೆಸಿದಾಗ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿರಲಿಲ್ಲ. ಕೊಲೆ ಎಂಬುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಎಸ್ಪಿ ಅಕ್ಷಯ್ ಮಚ್ಚೀಂದ್ರ ಹೇಳಿದ್ದಾರೆ.
ಪತಿಯ ಸಾವಿನಲ್ಲಿ ಸಂಶಯವಿದೆ: ಪತ್ನಿ ಮಂಜುಳಾ ಉಡುಪಿಗೆ ಆಗಮಿಸಿರುವ ಮೃತ ಹನುಮಂತಪ್ಪನ ಪತ್ನಿ ಮಂಜುಳಾ ಅವರು ನನ್ನ ಪತಿಯ ಸಾವಿನಲ್ಲಿ ಸಂಶಯವಿದೆ. ಹಾಗಾಗಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ದೂರು ನೀಡಿದ್ಧಾರೆ. ಅದರ ಆಧಾರದಲ್ಲಿ ತನಿಖೆ ಮುಂದುವರಿದಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.