



ಮಂಗಳೂರು: ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದ ವತಿಯಿಂದ ಆ.11 ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಾಮಕೃಷ್ಣ ಕಾಲೇಜಿನ ವಠಾರದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯು ಅದ್ಧೂರಿಯಾಗಿ ನಡೆಯಿತು. ಕಾರ‍್ಯಕ್ರಮವು ಬೆಳಿಗ್ಗೆ ಗ್ರಾಮೀಣ ಕ್ರೀಡಾ ಚಟುವಟಿಕೆಗಳೊಂದಿಗೆ ಪ್ರಾರಂಭವಾಯಿತು.
ರಾಮಕೃಷ್ಣ ಕಾಲೇಜಿನ ಸಂಚಾಲಕರಾದ ಡಾ.ಸಂಜೀವ ರೈ ಇವರು ಬಲೂನು ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ನಿಂಬೆ ಹಣ್ಣಿನ ಓಟ, ಮೂರು ಕಾಲಿನ ಓಟ, ಗೋಣಿಚೀಲದ ಓಟ, ಗೂಟ ಸುತ್ತಿ ಓಡುವುದು, ಹಗ್ಗಜಗ್ಗಾಟದ ಮುಂತಾದ ಕ್ರೀಡಾ ಚಟುವಟಿಕೆಗಳ ಜೊತೆಗೆ ಮಡಲು ನೇಯುವ ಸ್ಪರ್ಧೆಗಳು ನಡೆದವು. ಈ ಕಾರ‍್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಸೇರಿ ಅಂದಾಜು 2೦೦ ಜನರು ಪಾಲ್ಗೊಂಡು ಸಂಭ್ರಮಿಸಿದರು.
ಮಧ್ಯಾಹ್ನ ನಡೆದ ಸಭಾ ಕಾರ‍್ಯಕ್ರಮವನ್ನು ಶ್ರೀ ಹಾಲಾಡಿ ಶಾಂತರಾಮ ಶೆಟ್ಟಿ, ನಿವೃತ್ತ, ಡಿ.ಜಿ.ಎಂ., ವಿಜಯ ಬ್ಯಾಂಕ್ ಇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ಹಾಗೂ ಕಳಸಿಗೆ ಭತ್ತ ಸುರಿದು ನೆಣೆಕೋಲು ಹಚ್ಚುವ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಾನು ಉದ್ಯೋಗ ನಿಮಿತ್ತ ರಾಜ್ಯದ ಬೇರೆ ಬೇರೆ ನೆಲಸಿದ್ದರೂ ನಾನು ಮಾತ್ರ ಭಾಷೆಯಾದ ಕುಂದಾಪ್ರ ಕನ್ನಡವನ್ನು ಈಗಲೂ ಮರೆತಿಲ್ಲ. ಮನೆಯಲ್ಲಿ ಕುಂದಗನ್ನಡವನ್ನೇ ಮಾಡನಾಡುತ್ತೇನೆ. ನಾವು ಎಂದೆಂದಿಗೂ ನಮ್ಮ ಮಾತೃ ಭಾಷೆಯನ್ನು ಬಳಸಿ ಉಳಿಸಿಬೇಕು ಎಂದು ಕರೆಕೊಟ್ಟರು. ಬಳಿಕ ಶ್ರೀ ಬಾಲಕೃಷ್ಣ ಶೆಟ್ಟಿ, ನಿವೃತ್ತ ಪ್ರಾಂಶುಪಾಲರು, ರಾಮಕೃಷ್ಣ ಕಾಲೇಜು, ಬಂಟ್ಸ್ ಹಾಸ್ಟೆಲು, ಮಂಗಳೂರು ಇವರು ಕುಂದಗನ್ನಡ ಶೈಲಿಯ ಲಘುಧಾಟಿಯ ಭಾಷಣದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿ ಕುಳ್ಳಿರಿಸಿದರು. ನಂತರ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ. ಮತ್ತು ಪಿಯು ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಕಾರ‍್ಯಕ್ರಮದ ಪ್ರಧಾನ ಪ್ರಾಯೋಜಕರಾದ ಶೇಖರ್ , ತಮನ್ವಿ ಕನ್ಸ್ಟ್ರಕ್ಷನ್ ಮಂಗಳೂರು ಮತ್ತು ಕುಂದಗನ್ನಡ ಕಲಾವಿದರಾದ ಶ್ರೀ ಚೇತನ್ ನೈಲಾಡಿ ಇವರನ್ನು ಸನ್ಮಾನಿಸಲಾಯಿತು. ಕರುಣಾಕರ ಬಳ್ಕೂರು ಸಂಪಾದಿತ ಕೃತಿ ಕುಂದಾಪ್ರ ಕನ್ನಡ ಕಥಾ ಸಂಕಲನ ‘ನುಡಿ ತೇರು’ ಹೊತ್ತಿಗೆಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಸಂಸದರಾದ ಶ್ರೀ ಬ್ರಿಜೇಶ್ ಚೌಟ ಮತ್ತು ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ಬಂಟರ ಯಾನೆ ನಾಡವರ ಸಂಘ, ಮಂಗಳೂರು ಇವರು ಆಗಮಿಸಿ ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.