



ಉಡುಪಿ, : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳಲಗಿರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿ.ಟಿ.ಟಿ.ಸಿ ತಾಂತ್ರಿಕ ಕಾಲೇಜು ಉಪ್ಪೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವು ಗುರುವಾರ ಉಪ್ಪೂರಿನ ಜಿ.ಟಿ.ಟಿ.ಸಿ ತಾಂತ್ರಿಕ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ. ಲತಾ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ಕ್ರಿಯಾತ್ಮಕ ಕೆಲಸಗಳ ಮೂಲಕ ಭರವಸೆ ಮೂಡಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸುತ್ತಿದ್ದು, ಬಿಡುವಿಲ್ಲದ ಜೀವನಶೈಲಿ, ಒತ್ತಡವು ಜನರನ್ನು ಖಿನ್ನತೆಗೆ ಒಳಗಾಗಿಸುತ್ತದೆ. ಈ ಖಿನ್ನತೆಯ ಕಾರಣದಿಂದ ಪ್ರಪಂಚಾದ್ಯಂತ ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಗಂಭೀರ ಸಾರ್ವಜನಿಕ ಸಮಸ್ಯೆಯಾಗಿದ್ದು, ಇಂತಹ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 10 ನೇ ತಾರೀಖಿನಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಾನಸಿಕ ತೊಂದರೆಗಳಿಗೆ ಒಳಗಾದರೆ 14416 - ಟೆಲಿಮನಸ್ ನಂಬರ್ ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಮನೋರೋಗ ತಜ್ಞ ಡಾ.ಹೃತಿಕಾ ಸಾಲ್ಯಾನ್ ಮಾತನಾಡಿ, ಮಾದಕ ವ್ಯಸನ ಮತ್ತು ಮದ್ಯ ದುರ್ಬಳಕೆ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾಗಬಹುದು. ಮಾದಕವ್ಯಸನವು ಮಾನಸಿಕ ಆರೋಗ್ಯ ಸಮಸ್ಯೆಗಳು, ಹಣಕಾಸಿಕ ತೊಂದರೆಗಳು, ಜನರಲ್ಲಿ ತಾಳ್ಮೆ ವೇಗವಾಗಿ ಕ್ಷೀಣಿಸುವುದು ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿಲ್ಲ ಹಾಗೂ ಉದ್ಯೋಗ ಸಂಬAಧ, ಆರ್ಥಿಕ ಪರಿಸ್ಥಿತಿ, ಪ್ರೇಮ ವೈಫಲ್ಯ ಇವೆಲ್ಲವೂ ಆತ್ಮಹತ್ಯೆಗೆ ಕಾರಣವಾಗಬಹುದು. ಈ ಸಮಸ್ಯೆಗಳು 15-29 ವರ್ಷ ವಯೋಮಾನದವರಲ್ಲಿ ಹೆಚ್ಚು ಎಂದು ವಿಶ್ವಸಂಸ್ಥೆ ಹೇಳಿದೆ ಎಂದು ವಿವರಿಸಿದರು.
ಕೊಳಲಗಿರಿ ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಮಂಜುನಾಥ ನಾಯಕ್, ಕಾಲೇಜಿನ ಶಿಕ್ಷಕ ವೃಂದದ ಶುಶ್ರೂಷಣಾಧಿಕಾರಿ ದೀಕ್ಷಾ, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕ್ಲೀನಿಕಲ್ ಸೈಕಾಲಾಜಿಸ್ಟ್ ಕ್ಯಾಥರೀನ್ ಜೆನ್ನಿಫರ್ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ಸೈಕ್ಯಾಟ್ರಿ ಸೋಶಿಯಲ್ ವರ್ಕರ್ ವಸಂತಿ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.