



ಉಡುಪಿ: ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ (75) ಮಂಗಳವಾರ ರಾತ್ರಿ ಹೊನ್ನಾವರದಲ್ಲಿ ನಿಧನರಾದರು. ಅವರು ಪತ್ನಿ ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಪ್ರಸಿದ್ಧ ಭಾಗವತರಾದ ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆಯವರಲ್ಲಿ ಯಕ್ಷಗಾನ ಕಲಿತು, ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಶ್ರೇಷ್ಠ ಕಲಾವಿದರಾಗಿ ಅವರು ರೂಪುಗೊಂಡಿದ್ದರು. ಗುಂಡುಬಾಳ, ಇಡಗುಂಜಿ, ಬಚ್ಚಗಾರು, ಶಿರಸಿ,ಪಂಚಲಿಂಗ, ಮಂದಾರ್ತಿ ಮೇಳಗಳಲ್ಲಿ ಐದು ದಶಕಗಳ ಕಲಾ ಸೇವೆ ಗೈದಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಖಳ ಮತ್ತು ಸಾತ್ವಿಕ ಎರಡೂ ರೀತಿಯ ಪಾತ್ರಗಳನ್ನೂ ಸಮರ್ಥವಾಗಿ ಪ್ರಸ್ತುತ ಪಡಿಸುತ್ತಾ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದ ಹೆಗಡೆ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.